ಬೆಂಗಳೂರು: ಮನೆ ಕಟ್ಟುವ ನೆಪದಲ್ಲಿ ಸಾರ್ವಜನಿಕ ರಸ್ತೆಯಲ್ಲೇ ಮರಳು, ಇಟ್ಟಿಗೆ ಹಾಗೂ ಕಲ್ಲುಗಳನ್ನು ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದ ವ್ಯಕ್ತಿಯೊಬ್ಬರಿಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ. ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ನ್ಯಾಯಾಲಯ ನಿರಾಕರಿಸಿದೆ.
ಅಲ್ಲದೇ, ರಸ್ತೆಯಲ್ಲಿ ಮರಳು, ಕಲ್ಲು ಹಾಕಿ ರಾಜ್ಯಭಾರ ಮಾಡುತ್ತಿದ್ದೀರಾ? ನೀವೇನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೀರೋ? ಅಥವಾ ರಾಜರ ಕಾಲದಲ್ಲಿದ್ದಿರೋ? ಎಂದು ತೀಕ್ಷ್ಣವಾಗಿ ಪ್ರಶ್ನಿಸುವ ಮೂಲಕ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.
ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಮತ್ತು ದೇವನಹಳ್ಳಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ ಹೀಗೆ ತರಾಟೆಗೆ ತೆಗೆದುಕೊಂಡಿತು.
ವಿಚಾರಣೆ ವೇಳೆ ಅರ್ಜಿದಾರರ ವಕೀಲರು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಎಂ-ಸ್ಯಾಂಡ್ , ಕಲ್ಲುಗಳನ್ನು ಸೇರಿ ಇನ್ನಿತರ ನಿರ್ಮಾಣ ಸಾಮಗ್ರಿಗಳನ್ನು ರಸ್ತೆಯಲ್ಲಿ ಹಾಕಿದ್ದಾರೆ. ಅದನ್ನು ತೆರವುಗೊಳಿಸಲು ಸ್ಥಳೀಯ ಅಧಿಕಾರಿಗಳು ಸೂಚಿಸಿದ್ದರೂ ಪದೇ ಪದೆ ರಸ್ತೆಯಲ್ಲಿಯೇ ಸಾಮಗ್ರಿ ಹಾಕಿದ್ದಾರೆ ಎಂಬ ಆರೋಪ ನಿಮ್ಮ (ಅರ್ಜಿದಾರರ) ಮೇಲಿದೆ. ಏಕೆ ಮರಳು, ಕಲ್ಲು ರಸ್ತೆ ಮೇಲೆ ಹಾಕಿದ್ದೀರಿ? ಜನರು ರಸ್ತೆಯಲ್ಲಿ ಓಡಾಡಬಾರದೇ? ರಸ್ತೆ ಇರುವುದು ಮನೆ ಕಟ್ಟುವ ಸಾಮಗ್ರಿ ಹಾಕುವುದಕ್ಕಾಗಿಯೇ? ಸಾರ್ವಜನಿಕರಿಗೆ ಏಕೆ ತೊಂದರೆ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದರು.
ನಂತರ ತಪ್ಪು ಮಾಡಿ, ಹೈಕೊರ್ಟ್ಗೆ ಬಂದು ಪ್ರಕರಣ ರದ್ದತಿಗೆ ಕೋರುತ್ತಿದ್ದೀರಾ? ಅರ್ಜಿ ಹಿಂಪಡೆಯುತ್ತೀರೋ? ಮೆರಿಟ್ ಮೇಲೆ ತೀರ್ಪು ಬರೆಸಲೋ? ನಾನು ತೀರ್ಪು ಬರೆದರೆ, ವಿಚಾರಣಾ ಕೋರ್ಟ್ನಲ್ಲಿ ನೀವು ಸಂಕಷ್ಟ ಎದುರಿಸಬೇಕಾಗುತ್ತದೆ? ಎಂದು ಅರ್ಜಿದಾರರಿಗೆ ನ್ಯಾಯಮೂರ್ತಿಗಳು ಸೂಚಿಸಿದರು. ಅದಕ್ಕೆ ಅರ್ಜಿದಾರರ ಪರ ವಕೀಲರು, ಅರ್ಜಿಯನ್ನು ಹಿಂಪಡೆಯುವುದಾಗಿ ತಿಳಿಸಿದರು.
ಅದನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ಕೆಲ ಕಾಲ ವಾದ ಮಂಡಿಸಿದ ನಂತರ ಅರ್ಜಿ ಹಿಂಪಡೆಯುವುದಾಗಿ ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ. ಅದರಂತೆ ಅರ್ಜಿ ಹಿಂಪಡೆಯಲು ಅನುಮತಿ ನೀಡಲಾಗುತ್ತಿದೆ. ತಮ್ಮ ಎಲ್ಲ ವಾದಾಂಶಗಳನ್ನು ವಿಚಾರಣಾ ನ್ಯಾಯಾಲಯದ ಮುಂದೆ ಮಂಡಿಸಲು ಅರ್ಜಿದಾರರು ಸ್ವತಂತ್ರರಾಗಿದ್ದಾರೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿದರು.
ಇದನ್ನೂ ಓದಿ:
ಮದ್ಯ ಸೇವಿಸಿ ಬೈಕ್ ಸವಾರಿ ವೇಳೆ ಅಪಘಾತ: ಪರಿಹಾರದಲ್ಲಿ ಶೇ.30ರಷ್ಟು ಕಡಿತಗೊಳಿಸಿದ ಹೈಕೋರ್ಟ್
(0)Comments