ನಿರಂಜನಾರಾಧ್ಯ ವಿ.ಪಿ.
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಪಿಎಂಸಿಗೆ ಭೇಟಿ ನೀಡಿದಾಗ ರಕ್ಷಿಸಲ್ಪಟ್ಟ ಮಕ್ಕಳಿಗೆ ತಕ್ಷಣವೇ ಪುನರ್ವಸತಿ, ಶಿಕ್ಷಣ ಮತ್ತು ಪರಿಹಾರದ ವ್ಯವಸ್ಥೆ ಮಾಡಬೇಕು ಎಂದು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯದ ಪ್ರದಾನ ಸಂಚಾಲಕ ನಿರಂಜನಾರಾಧ್ಯ ವಿ.ಪಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ಕಳೆದ ಹಲವು ವರ್ಷಗಳಿಂದ ಎಪಿಎಂಸಿಗಳು, ಗಾರ್ಮೆಂಟ್ಸ್, ಹೋಟೆಲ್, ಗ್ಯಾರೇಜ್‌ಗಳಲ್ಲಿ ಮುಗ್ಧ ಮಕ್ಕಳನ್ನು ಅಲ್ಪ ಕೂಲಿಗೆ ದುಡಿಸಿಕೊಳ್ಳುವ ಅನಿಷ್ಟ ಪದ್ಧತಿ ಅವ್ಯಾಹತವಾಗಿ ನಡೆಯುತ್ತಿದೆ. ಮಕ್ಕಳು ಶಾಲೆಯಲ್ಲಿ ಇರಬೇಕಾದ ವಯಸ್ಸಿನಲ್ಲಿ ಮೂಟೆ ಹೊರುತ್ತಿದ್ದಾರೆ, ಹಮಾಲಿ ಕೆಲಸ ಮಾಡುತ್ತಿದ್ದಾರೆ. ಇದು ಬಾಲ್ಯವನ್ನೇ ಕಸಿದುಕೊಳ್ಳುವ ಅಪರಾಧ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಆದೇಶ ಕೇವಲ ಎಪಿಎಂಸಿಗೆ ಸೀಮಿತವಾಗಬಾರದು. ರಾಜ್ಯದ ಎಲ್ಲಾ ಎಪಿಎಂಸಿ, ಮಾರುಕಟ್ಟೆ, ಕೈಗಾರಿಕಾ ಪ್ರದೇಶಗಳಲ್ಲಿ ವಿಶೇಷ ದಾಳಿ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಬಾಲಕಾರ್ಮಿಕರನ್ನು ನೇಮಿಸಿಕೊಂಡ ಮಾಲಕರ ವಿರುದ್ಧ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಮತ್ತು ಜೆಜೆ ಕಾಯ್ದೆ ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಬೇಕು. ಶಿಕ್ಷಣ ಹಕ್ಕು ಕಾಯಿದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಒಂದು ರೋಡ್ ಮ್ಯಾಪ್ ತಯಾರಿಸಬೇಕು ಎಂದು ಒತ್ತಾಯಿಸಿದ್ದಾರೆ.
(0)Comments