ರೈತರು ಸಾಮುದಾಯಿಕ ನೆಲೆಯಲ್ಲಿ ಒಗ್ಗೂಡಿ ಮಾರುಕಟ್ಟೆಯಲ್ಲಿ ಯಶಸ್ಸು ಪಡೆಯುವ ಉದ್ದೇಶದಿಂದ ರೂಪುಗೊಂಡ 'ರೈತ ಉತ್ಪಾದಕ ಸಂಸ್ಥೆ'ಗಳು (ಎಫ್‌ಪಿಒ) ವಹಿವಾಟು ನಿರ್ವಹಣೆಯಲ್ಲಿ ಏದುಸಿರು ಬಿಡುತ್ತಿವೆ. ಅತಿ ಉತ್ಸಾಹದಿಂದ ಸ್ಥಾಪನೆಗೊಂಡ 'ಎಫ್‌ಪಿಒ'ಗಳು ಪ್ರಸ್ತುತ ಮೂಲ ಉದ್ದೇಶ ದಿಂದ ದೂರವಾಗಿ, ಮೂರನೇ ವ್ಯಕ್ತಿಗಳ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಅವುಗಳ ಕಾರ್ಯವೈಖರಿ ಮೇಲೆ ಅಡ್ಡಪರಿಣಾಮ ಬೀರಿದೆ.
ಕೃಷಿ ಪ್ರಧಾನ ದೇಶದಲ್ಲಿ ರೈತನು ಉತ್ಪಾದನೆಗಷ್ಟೇ ಸೀಮಿತವಾಗಿ, ಮಾರುಕಟ್ಟೆಯು ದಲ್ಲಾಳಿಗಳ ಕಪಿಮುಷ್ಠಿಗೆ ಸಿಲುಕಿದೆ. ಇದನ್ನು ತಪ್ಪಿಸಿ, ರೈತರು ಒಗ್ಗೂಡಿ ಕಂಪನಿ ಸ್ವರೂಪದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡುವ ದೃಷ್ಟಿಯಿಂದ ಸರ್ಕಾರಗಳು ಎಫ್‌ಪಿಒ ಸ್ಥಾಪಿಸಲು ಅವಕಾಶ ನೀಡಿವೆ. ಇದೊಂದು ಬಗೆಯಲ್ಲಿ ಸೊಸೈಟಿ ಹಾಗೂ ಕಂಪನಿ ಕಾರ್ಯವೈಖರಿಯ ಹೈಬ್ರಿಡ್ ಮಾದರಿ. ಕಂಪನಿಗಳ ಕಾಯ್ದೆ ಪ್ರಕಾರ ನೋಂದಾಯಿತ ವಾದರೆ ಅವುಗಳನ್ನು 'ರೈತ ಉತ್ಪಾದಕ ಕಂಪನಿ' (ಎಫ್‌ಪಿಸಿ) ಎಂದೂ, ಸೊಸೈಟಿ ಕಾಯ್ದೆ ಪ್ರಕಾರ ನೋಂದಾಯಿಸಿದರೆ ಎಫ್‌ಪಿಒ ಎಂದೂ ಪರಿಗಣಿಸಲಾಗು ತ್ತಿದೆ. ಒಟ್ಟಾರೆಯಾಗಿ 'ರೈತನೇ ಮಾಲೀಕ; ವೃತ್ತಿಪರರಿಂದ ನಿರ್ವಹಣೆ' ಎಂಬುದು ರೈತ ಉತ್ಪಾದಕ ಸಂಸ್ಥೆ ಅಥವಾ ರೈತ ಕಂಪನಿಗಳ ಧ್ಯೇಯ.
ರೈತನಿಂದ ಖರೀದಿಸುವ ಉತ್ಪನ್ನ ಅಂತಿಮವಾಗಿ ಗ್ರಾಹಕನಿಗೆ ತಲಪುವಾಗ ಅದರ ದರ ದುಪ್ಪಟ್ಟು ಆಗಿರುತ್ತದೆ. ಇದಕ್ಕೆ ಹಲವು ಹಂತ ಗಳ ಪ್ರಕ್ರಿಯೆ ಕಾರಣವಾಗಿದೆ. ಆ ಪ್ರಕ್ರಿಯೆಯನ್ನು ಖಾಸಗಿ ಕಂಪನಿಗಳ ಬದಲಿಗೆ 'ರೈತ ಕಂಪನಿ'ಗಳೇ ನಿರ್ವಹಿಸಿದರೆ ಉತ್ಪಾದಕರಿಗೆ ಅಧಿಕ ಆದಾಯ ಸಿಕ್ಕೀತು. ಇಂಥ ಉದಾತ್ತ ಉದ್ದೇಶಗಳನ್ನು ಇಟ್ಟುಕೊಂಡು ರೂಪಿಸಲಾದ ಎಫ್‌ಪಿಒ ಮಾದರಿಯು ಈಗ ತರಹೇವಾರಿ ಅಡ್ಡಿ ಆತಂಕ ಎದುರಿಸುತ್ತಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 10,000 ಎಫ್‌ಪಿಒ ಸ್ಥಾಪನೆಯು, ರೈತ ಕಂಪನಿ ಶುರುವಾಗುವಲ್ಲಿ ಹೆಚ್ಚು ನೆರವಾಯಿತು. ಆದರೆ ಅದರ ಸಮರ್ಪಕ ಮುಂದುವರಿಕೆಯೇ ಈಗ ಅನುಮಾನ ಎಂಬಂತಾಗಿದೆ.
ಕಂಪನಿಗಳ ವಹಿವಾಟಿಗೆ ಬಂಡವಾಳ ಬೇಕು. ಅದನ್ನು ಷೇರುದಾರರಿಂದ (ರೈತರು) ಪಡೆಯಲಾಗುತ್ತದೆ. ಆದರೆ ಅದು ಯಾವುದಕ್ಕೂ ಸಾಲದು. ಕೊಯ್ಲಿನ ಸಂದರ್ಭದಲ್ಲಿ ಉತ್ಪನ್ನ ಖರೀದಿಗೆ ಅಗತ್ಯ ಹಣ ಲಭ್ಯವಾಗದೆ, ಬ್ಯಾಂಕಿನ ಮೊರೆ ಹೋದರೆ ಅಲ್ಲಿ ಖಂಡಿತವಾಗಿಯೂ ನಿರಾಶೆ! ಹಿಂದೆ ಯಾವುದೇ ವಹಿವಾಟು ನಡೆಸಿರದ ಸಂಸ್ಥೆಗಳನ್ನು ಬ್ಯಾಂಕು ಗಳು ನಂಬುವುದೇ ಇಲ್ಲ. ಷೇರುದಾರ ರೈತರಿಂದ ಪಡೆದ ಕಿರು ಪ್ರಮಾಣದ ಬಂಡವಾಳದಲ್ಲಿ ಕಂಪನಿ ಏನು ತಾನೇ ಮಾಡೀತು? ಹಾಗೂ ಹೀಗೂ ಮಾಡಿ ಸ್ಥಿತಿವಂತ ರಿಂದ ಹೆಚ್ಚು ಬಂಡವಾಳ ಪಡೆಯಲು ಮುಂದಾದರೆ, ನಿಗದಿತ ಸಂಖ್ಯೆಯ ರೈತರಿಂದ ಷೇರು ಪಡೆದರೆ ಮಾತ್ರ ಸಮಪ್ರಮಾಣದ ನೆರವು (ಮ್ಯಾಚಿಂಗ್ ಗ್ರ್ಯಾಂಟ್) ಕೊಡುವ ಸರ್ಕಾರದ ನಿಬಂಧನೆಯು ಮುಂದಿನ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. 'ಪರ್ಯಾಯ' ದಾರಿಗಳನ್ನು ಹುಡುಕಿ ಕಂಪನಿ ಶುರು ಮಾಡಿದರೆ ಧುತ್ತೆಂದು ಸವಾಲುಗಳು ಎದುರಾಗುತ್ತವೆ.
ರೈತ ಕಂಪನಿಗಳಿಗೆ ಮೊದಲೆಲ್ಲ ತೆರಿಗೆ ವಿನಾಯತಿ ಇತ್ತು; ಈಗ ಎರಡು ವರ್ಷಗಳಿಂದ ಅದನ್ನು ತೆಗೆದುಹಾಕಲಾಗಿದೆ. ರೈತರಿಗಾಗಿ ರೈತರೇ ಕಟ್ಟಿಕೊಂಡ ಕಂಪನಿಗೆ ತೆರಿಗೆ ವಿಧಿಸು ವುದು ಎಂಥ ನ್ಯಾಯ? ಇದು ಕೇಂದ್ರ ಸರ್ಕಾರದ ಕ್ರಮ ವಾದರೆ, ಎಪಿಎಂಸಿ ಸೌಲಭ್ಯ ಬಳಸಿಕೊಳ್ಳದೇ ಹೋದರೂ ರಾಜ್ಯ ಸರ್ಕಾರ ಎಪಿಎಂಸಿ ಸೆಸ್ ವಸೂಲಿ ಮಾಡುತ್ತಿದೆ! ಎಫ್‌ಪಿಒ ಲಾಭ ಪಡೆಯುವುದೇ ವಹಿವಾಟು ಶುರುವಾದ ಏಳೆಂಟು ವರ್ಷಗಳ ನಂತರದಲ್ಲಿ. ಅಷ್ಟರಲ್ಲಿ ಬಗೆಬಗೆಯ ನೋಂದಣಿ ಶುಲ್ಕ, ತೆರಿಗೆ, ರೈತರಿಗೆ ಉತ್ತಮ ಬೆಲೆ ನೀಡಿ, ವಹಿವಾಟು ನಡೆಸಿ, ಆಮೇಲೆ ಪಡೆದ ಲಾಭಕ್ಕೆ ಕಂಪನಿಗಳು ತೆರಿಗೆ ತೆರಬೇಕು. ಇಂಥ ಕಷ್ಟ–ಕೋಟಲೆ ಎದುರಿಸಿ ಯಾವ ರೈತ ಕಂಪನಿ ಬದುಕೀತು?
ಇದಕ್ಕಾಗಿ ಹಲವು ರೈತ ಕಂಪನಿಗಳು ಕೃಷಿ ಉತ್ಪನ್ನದ ಬದಲಿಗೆ ರಸಗೊಬ್ಬರ, ಟಾರ್ಪಾಲಿನ್ ಮಾರಾಟ ನಡೆಸು ತ್ತಿವೆ. ಇದೇ ಇವುಗಳ ವಹಿವಾಟು ಆದಂತಾಗಿದೆ. ಕಷ್ಟಪಟ್ಟು ವಹಿವಾಟು ನಡೆಸುವ ಕಂಪನಿಗಳು ವಾರ್ಷಿಕ ಮಹಾಸಭೆ, ತೆರಿಗೆ, ಲೆಕ್ಕ ಪರಿಶೋಧನೆಯಂಥ ಹಣಕಾಸು ನಿರ್ವಹಣೆ ಯಲ್ಲಿ ಹೈರಾಣಾಗುತ್ತವೆ. ಇದಂತೂ, ಮುಂದೆ ಭಾರೀ ದಂಡ ತೆರುವ ಸಾಧ್ಯತೆಯ ಆತಂಕದ ಸಂಗತಿ.
ಸರ್ಕಾರ, ಸಂಸ್ಥೆಗಳ ಉತ್ತೇಜನದಿಂದ ಪ್ರತಿ ಜಿಲ್ಲೆಯಲ್ಲಿ ಹತ್ತಾರು ಎಫ್‌ಪಿಒ ಶುರುವಾಗಿವೆ. ಆದರೆ ಅವುಗಳನ್ನು ನಿರ್ವಹಿಸಬೇಕಾದ ಆಡಳಿತ ಮಂಡಳಿಯ ಸಾಮರ್ಥ್ಯ ವೃದ್ಧಿ ಕೆಲಸ ನಡೆದೇ ಇಲ್ಲ. ರೈತರ ಉತ್ಪನ್ನಕ್ಕೆ ಸೂಕ್ತ ಬೆಲೆ ಕೊಡುವುದು, ಸಂಸ್ಕರಣೆ, ಶೇಖರಣೆ ಹಾಗೂ ಮೌಲ್ಯವರ್ಧನೆಯಂಥ ಕ್ರಮ ಗಳ ಮೂಲಕ ರೈತ ಸಮುದಾಯದ ಹಿತ ಕಾಪಾಡಬೇಕಾದ ಎಫ್‌ಪಿಒ ವಲಯ, ಹಲವು ಸವಾಲುಗಳನ್ನು ಎದುರಿಸುತ್ತ ಏದುಸಿರು ಬಿಡುತ್ತಿದೆ. ವೃತ್ತಿಪರ ನಿಪುಣರಿಂದ ನಿರ್ವಹಣೆ ಯಾಗಿ, ಸಫಲ ದಾರಿಯಲ್ಲಿ ನಡೆಯುತ್ತಿರುವ ಕೆಲ 'ರೈತ ಕಂಪನಿ'ಗಳು ಕರ್ನಾಟಕದಲ್ಲೇ ಇವೆ. ಬಂಡವಾಳ ಕೊರತೆ, ತೆರಿಗೆ, ಶುಲ್ಕ, ಸೆಸ್ ಎಂಬ ಚಕ್ರವ್ಯೂಹದಲ್ಲಿ ಸಿಲುಕಿರುವ ರೈತ ಕಂಪನಿಗಳನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಲು ಸರ್ಕಾರಗಳು ಮುಂದಾಗದೇ ಹೋದರೆ, ಈ ಎಫ್‌ಪಿಒಗಳು ಬಂಡವಾಳಶಾಹಿ ತಿಮಿಂಗಿಲಗಳಿಗೆ ಆಹಾರ ಆಗುವುದರಲ್ಲಿ ಸಂಶಯವೇ ಇಲ್ಲ!
(0)Comments